Sunday 23 October 2016

ಗುರು ಸಾಕ್ಷಾತ್ ಪರ ಬ್ರಹ್ಮ..

23/10/2016 ರ ಭಾನುವಾರದ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನನ್ನ ಲೇಖನ
ಅದೊಂದು ಪುಟ್ಟ ಹಳ್ಳಿ, ಹಳ್ಳಿಯ ಮಧ್ಯದಲ್ಲಿ ಹರಳಿಕಟ್ಟೆ. ಕಟ್ಟೆಯ ಮೇಲೆ ಕೂತು ಕಾಲಹರಣ ಮಾಡಿ ಜೀವನ ಸವೆಸುವವರನ್ನ ಅಣಕಿಸಲೆಂದೇ ಇರುವಂತೆ ಅರಳಿಕಟ್ಟೆಯ ಎದುರಿಗೆ ಒಂದು ಪುಟ್ಟ ಸರ್ಕಾರಿಶಾಲೆ. ನಾಲ್ಕು ಜನ ಕೂರಬಹುದಾದ ಆಫೀಸ್ ರೂಮ್ ಬಿಟ್ಟರೆ ಮಕ್ಕಳನ್ನು ಕೂರಿಸಿ ಪಾಠ ಹೇಳಲೆಂದು ಇದ್ದದ್ದು ಮೂರೇ ಮೂರು ಕ್ಲಾಸ್ ರೂಮ್ ಗಳು ಮಾತ್ರ. ಒಂದರಿಂದ ಏಳನೇ ತರಗತಿವರೆಗಿನ ಎಲ್ಲ ಮಕ್ಕಳನ್ನು ಕೂರಿಸಿ ಪಾಠ ಮಾಡುತ್ತಿದ್ದು ಮೂರು ಕ್ಲಾಸ್ ರೂಮ್ ಗಳಲ್ಲಿ. ಇಂತಹ ಶಾಲೆಗೆ ನಾ ಮೂರನೇ ತರಗತಿಯಲ್ಲಿದ್ದಾಗ ವರ್ಗವಾಗಿ ಬಂದದ್ದೇ ಜಯರಾಮಯ್ಯ ಮೇಸ್ಟ್ರು. ಅದಾದ ನಂತರ ಸಾಕಮ್ಮ ಮೇಡಂ , ಕೃಷ್ಣಮೂರ್ತಿ ಸರ್, ಗವಿಯಪ್ಪ ಸರ್ ಕೂಡ ನಮ್ಮ ಶಾಲೆಗೆ ವರ್ಗವಾಗಿ ಬಂದರು. ಶಿಸ್ತಿನ ಸಿಪಾಯಿಯಂತಿದ್ದ ಜಯರಾಮಯ್ಯ ಸರ್ ಬಂದ ಕೆಲವೇ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದರು. ಮೂರು ಕ್ಲಾಸ್ ರೂಮ್ ಗಳಲ್ಲಿ ಎಲ್ಲರನ್ನು ಕೂರಿಸಿ ಪಾಠಮಾಡುವುದು ಕಷ್ಟ ಸಾಧ್ಯವೆಂದರಿತು ಇದ್ದ ಸ್ವಲ್ಪ ಶಾಲಾ ಕಾಂಪೌಂಡ್ ಅರ್ಧ ಜಾಗದಲ್ಲಿ ಹುಲ್ಲು ಬೆಳಸಿ, ನೆರಳು ಕೊಡುವಂತ ಗಿಡ ಮರಗಳನ್ನು ನೆಟ್ಟಿಸಿದರುಪ್ರತಿ ಗಿಡ ಗಿಡಕ್ಕೆ ಒಬ್ಬ ವಿದ್ಯಾರ್ಥಿಯನ್ನು ನೇಮಿಸಿ  ಗಿಡಗಳ ಬೆಳವಣಿಗೆಯನ್ನು ಮುತುವರ್ಜಿಯಿಂದ ಗಮನಿಸುತ್ತಿದ್ದರು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ತರಗತಿಗಳಿಗೆ ಹುಲ್ಲಿನ ಮೇಲೆ ಕೂರಿಸಿ ಪಾಠ ಮಾಡಿ ಜಾಗದ ಸಮಸ್ಯೆಯನ್ನು ನೀಗಿಸಿದರು. ಎಲ್ಲಾ ಶಿಕ್ಷಕರು ಮಕ್ಕಳಲ್ಲಿ ಶಿಕ್ಷಣದ ಮಹತ್ವದ ಅರಿವು ಮೂಡಿಸಿದರುಪಠ್ಯದ ವಿಷಯವನ್ನು ಹೇಳಿಕೊಡುವುದರ ಜೊತೆಗೆ ಪ್ರಯೋಗ ಮಾಡಿ ತೋರಿಸುತ್ತಿದ್ದರು, ಗವಿಯಪ್ಪ ಸರ್  ಅಂತು ಇತಿಹಾಸದಲ್ಲಿ ಬರುವ ಯುದ್ಧ ಸನ್ನಿವೇಶಗಳು ಕಣ್ಣಿಗೆ ಕಟ್ಟುವಂತೆ ಪಾಠ ಮಾಡುತ್ತಿದ್ದರು, ಕಬ್ಬಿಣದ ಕಡಲೆಯಂತಿದ್ದ ಇಂಗ್ಲಿಷ್ ಅನ್ನು ಸಾಕಮ್ಮ ಮೇಡಂ ಲೀಲಾಜಾಲವಾಗಿ ಕಲಿಸುತ್ತಿದ್ದರು.ಕೃಷ್ಣಮೂರ್ತಿ ಸರ್ ಪಾಠದ ಜೊತೆಗೆ ನಮ್ಮ ತಂದೆ ತಾಯಿಯರು ಪಡುತ್ತಿದ್ದ ಕಷ್ಟಗಳನ್ನ ಅರ್ಥೈಸುತ್ತಿದ್ದರು, ಜೀವನದಲ್ಲಿ ಏನಾದರೂ ಸಾಧಿಸಬೇಕು ಅನ್ನೋ ಛಲವನ್ನು ತುಂಬುತ್ತಿದ್ದರು. ಎಲ್ಲಾ ಬೆಳವಣಿಗೆಗಳಿಂದ ಖಾಸಗಿ ಶಾಲೆಗೆ ಹೋಗುತ್ತಿದ್ದವರು ಸರ್ಕಾರಿ ಶಾಲೆ ಸೇರಿದರು, ಶಾಲೆಬಿಟ್ಟ ಮಕ್ಕಳು ಮತ್ತೆ  ಶಾಲೆ ಸೇರಿದರು. ಅಕ್ಕಪಕ್ಕದ ಊರಿನಲ್ಲಿ ಶಾಲೆ ಇದ್ದರು ನಮ್ಮ ಶಾಲೆಯ ಬೆಳವಣಿಗೆಯಿಂದ ಅಲ್ಲಿನ ಮಕ್ಕಳೆಲ್ಲ ನಮ್ಮ ಶಾಲೆಗೆ ಸೇರಿದರು,
 ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಆಗಿ ನಮ್ಮೂರಿಗೆ ವೀರನಾಗಪ್ಪ ಸರ್ ವರ್ಗವಾಗಿ ಬಂದರು. ತುಂಬಾ ದಿನಗಳ ನಂತರ ಹೊಸ ಮೇಸ್ಟ್ರು ನಮ್ಮ ಶಾಲೆಗೆ ಬಂದಿದ್ದರಿಂದ ನಮ್ಮೂರಿನ ಮಕ್ಕಳಿಂದ ಮುದುಕರವರೆಗೂ ವೀರನಾಗಪ್ಪ ಸರ್ ಹೊಸ ಮೇಸ್ಟ್ರು ಅಂತಲೇ ಕರೆಯುತ್ತಿದ್ದೆವು. ಈಗಲೂ ಸಹ ವೀರನಾಗಪ್ಪ ಸರ್ ಎಂದರೆ ಯಾರಿಗೂ ಗೊತ್ತಾಗುವುದಿಲ್ಲ, ಇಂದಿಗೂ ಅವರು ನಮಗೆ ಹೊಸ ಮೇಷ್ಟ್ರೇ. ವೀರನಾಗಪ್ಪ ಸರ್ ಪಠ್ಯೇತರ ವಿಷಯಗಳಲ್ಲಿ ಆಸಕ್ತಿ ತೋರಿಸಿ ನಾಟಕ ಮಾಡಿಸಿದರು ಪಾಠದಲ್ಲಿ ಮುಂದಿದ್ದ ನಮ್ಮ ಶಾಲೆ ಈಗ ಎಲ್ಲ ವರ್ಗಗಳಲ್ಲೂ ಮುಂದೆ ನಿಂತು ಮಾದರಿ ಶಾಲೆಯೆನಿಸಿಕೊಂಡಿತ್ತು ಐದು ಶಿಕ್ಷಕರು ನಮ್ಮ ಶಾಲೆಯ ಸ್ತಂಭಗಳಂತಿದ್ದರು , ಪ್ರತಿಯೊಬ್ಬರೂ ಒಂದೊಂದು ವೈಶಿಷ್ಟ್ಯ. ಅದರಲ್ಲೂ ಜಯರಾಮಯ್ಯ ಸರ್ ಒಬ್ಬಶಿಕ್ಷಕರಷ್ಟೇ ಅಲ್ಲದೆ ಒಬ್ಬ ನುರಿತ ಮ್ಯಾನೇಜರ್ ಆಗಿ ಕಾಣುತ್ತಾರೆ ನನಗೆ. ಯಾವುದನ್ನ ಹೇಗೆ ನಿಭಾಯಿಸಬೇಕೋ ಹಾಗೆ ನಿಭಾಯಿಸುತ್ತಿದ್ದರು.ಎಲ್ಲ ವಿಷಯದಲ್ಲೂ  ಆರೋಗ್ಯಕರ ಸ್ಪರ್ಧೆಯನ್ನು ತಂದು  ಅಷ್ಟು ಪುಟ್ಟ ಶಾಲೆಯಲ್ಲಿ ಕೊರತೆಗಳನ್ನು ಮೆಟ್ಟಿನಿಂತು ಇರುವುದರಲ್ಲೇ ಒಳ್ಳೆಶಿಕ್ಷಣ ಕೊಡುವ ಕಡೆ ಗಮನ ಹರಿಸುತ್ತಿದ್ದರು. ಆಗೋದಿಲ್ಲ ಅನ್ನೋ ಮಾತು ಅವರಿಂದ ನಾ ಎಂದೂ ಕೇಳಿಲ್ಲ, ಬಹುಶ ಇವರ ಎಲ್ಲ ಗುಣಗಳಿಂದಲೇ ಎಲ್ಲ ಶಿಕ್ಷಕರು ಹೊಂದಾಣಿಕೆಯಿಂದ ನಮ್ಮ ಶಾಲೆಯ ಸ್ತಂಭಗಳಂತೆ ನಿಂತು ಮಕ್ಕಳ ಭವಿಷ್ಯಕ್ಕೆ ಅಡಿಗಲ್ಲಾಕಿದರು. ಅವರು ಕಲಿಸಿದ ಎಲ್ಲ ಮಕ್ಕಳೂ ಉನ್ನತ ಮಟ್ಟದಲ್ಲಿದ್ಧಾರೆ, ಒಳ್ಳೊಳ್ಳೆ ಆದರ್ಶಗಳನ್ನಿಟ್ಟುಕೊಂಡು ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲದಿಂದ ಮುನ್ನುಗ್ಗುತ್ತಿದ್ದಾರೆ. ಐದು ಶಿಕ್ಷಕರು ನಮ್ಮೂರಿನಿಂದ ವೈಯಕ್ತಿಕ ಕಾರಣಗಳಿಗೆ ನಮ್ಮ ಶಾಲೆಯಿಂದ ವರ್ಗವಾಗಿ ಹೋಗುವಾಗ ನಮ್ಮೂರು ಅಕ್ಷರಸಹ ನಮ್ಮಊರು ಶೋಕಾಚರಣೆಯ ರೀತಿ ಕಂಡು ಬಂದಿತು. ಇಂತಹ ಶಿಕ್ಷಕರರಿಂದ ಕಲಿತ ನಾವೇ ಧನ್ಯರು,
ನಮ್ಮ ಭವಿಷ್ಯಕ್ಕೆ ಭದ್ರಬುನಾದಿಯನ್ನು ಹಾಕಿದ ನಮ್ಮ ಪ್ರೀತಿಯ ಶಿಕ್ಷಕರೇ ನೀವುಗಳು ಇಂದು ಎಲ್ಲೇ ಇದ್ದರು ಹೇಗೆ ಇದ್ದರು ನಮ್ಮ ಮನಸಿನಲ್ಲಿ ಅಜರಾಮರರು. ಎಂದೆಂದಿಗೂ ನೀವೇ ನಮ್ಮಯ ಹೀರೋಗಳು                                                                                                                  --ಕವಿತಾ ಗೋಪಿಕುಂಟೆ