Sunday 31 March 2013

31/3/2013 ರ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನನ್ನ ಲೇಖನ "ಮುದ್ದಿಸುವ ಪೋಷಕರು ಮುಪ್ಪಾದ ಮೇಲೇಕೆ ಬೇಡ ".


ಅಪ್ಪ ಅಮ್ಮ ನಮ್ಮ ಕಣ್ಣ ಮುಂದಿರುವ ದೇವರುಗಳು. ಕೂಸು ಕಣ್ಣ ಬಿಡುವ ಮುನ್ನವೇ ಸಾವಿರಾರು ಕನಸು ಕಟ್ಟಿ ತನ್ನ ಮಕ್ಕಳಿಗೆ ಪ್ರಪಂಚದ ಎಲ್ಲಾ ಸುಖ ಸವಲತ್ತುಗಳನ್ನು ಕಲ್ಪಿಸಬೇಕೆಂದು ಜವಾಬ್ದಾರಿಗಳ ಸರಮಾಲೆಗೆ ಹೆಗಲು ಕೊಟ್ಟ ತಂದೆ, ನವ ಮಾಸ ತನ್ನೊಳಗೆ ಅಡವಿಟ್ಟು ಎಲ್ಲ ನೋವ ಸಹಿಸಿ ತಮ್ಮೆಲ್ಲ ಕನಸುಗಳಿಗೆ ರೆಕ್ಕೆ ಪುಕ್ಕ ಕಟ್ಟಲು ತನ್ನ ಒಡಲಕುಡಿಯನ್ನು ಭೂಮಿಗೆ ತರುವ ತಾಯಿ, ಎರಡು ಜೀವಗಳನ್ನು ಬಣ್ಣಿಸಲು ಪದಗಳೇ ಉಳಿದಿಲ್ಲ.

ತಮ್ಮೆಲ್ಲಾ ಆಸೆಗಳ ಬದಿಗಿಟ್ಟು ಕಷ್ಟಗಳ ನುಂಗಿಕೊಂಡು ಮಕ್ಕಳಿಗೆ ಬೇಕ್ಕಾದ್ದನ್ನೆಲ್ಲಾ ಮಾಡುತ್ತಾರೆ. ತಾವು ತಿನ್ನುವ ತುತ್ತನ್ನ ನಮ್ಮ ಮಕ್ಕಳು ತಿಂದರೆ ಚನ್ನಾಗಿರುತ್ತದಲ್ಲಾ ಎಂದು ಮಕ್ಕಳ ಬಾಯಿಗಿಡುತ್ತಾರೆ. ಏನೇ ತೆಗೆದುಕೊಳ್ಳಬೇಕಾದರೂ ತಂದೆ ತಾಯಿಗಳು ಮಕ್ಕಳಿಗೆ ಬೇಕಾದ್ದನ್ನು ಕೊಂಡು ನಂತರ ಅವರಿಗೆ ಬೇಕಾದ್ದನ್ನು ಕೊಳ್ಳುತ್ತಾರೆ. ನಾವು ಪಟ್ಟ ಕಷ್ಟವನ್ನು ನಮ್ಮ ಮಕ್ಕಳು ಪಡಬಾರದು ಎಂದು ಅವರಿಗೆ ಅವರ ಬಾಲ್ಯದಲ್ಲಿ ಸಿಗದ ಎಲ್ಲವನ್ನು ಮಕ್ಕಳಿಗೆ ಮಾಡುತ್ತಾರೆ. ನಾವು ಸಾಧಿಸಲಾಗದ್ದನ್ನು ನಮ್ಮ ಮಕ್ಕಳಾದರೂ ಸಾಧಿಸಲಿ ಎಂದು ತಮ್ಮ ಜೀವನವನ್ನೇ ಮಕ್ಕಳಿಗಾಗಿ ಧಾರೆ ಎರೆಯುತ್ತಾರೆ.
ಶಾಲೆಗೆ ಕಳುಹಿಸುವಾಗ ತಮ್ಮ ಆರ್ಥಿಕ ಸ್ಥಿತಿಗಿಂತ ಸ್ವಲ್ಪ ಹೆಚ್ಚಿನ ಮಟ್ಟದ ಶಾಲೆಯನ್ನೇ ಆರಿಸಿ ಕಳುಹಿಸುತ್ತಾರೆ. ತಮಗೆ ಏನೇ ತೊಂದರೆ ಇದ್ದರೂ ಮಕ್ಕಳಿಗೆ ಮಾತ್ರ ಏನೂ ಕಡಿಮೆ ಮಾಡದೆ ಎಲ್ಲವನ್ನು ಕೊಡಿಸುತ್ತಾರೆ.

ಕಾಲೇಜು ಮೆಟ್ಟಿಲೇರುವಾಗ ಮಕ್ಕಳ ಇಷ್ಟದ ಕಾಲೇಜಿಗೆ ಸಾಲವನ್ನಾದರೂ ಮಾಡಿ ಸೇರಿಸುತ್ತಾರೆ. ಕೆಲವೊಮ್ಮೆ ಎಲ್ಲೂ ಹಣ ಸಿಗದಿದ್ದಾಗ ತಾಯಿ ತನ್ನ ಮೈಮೇಲಿನ ವಡವೆಗಳನ್ನು ಮಾರಲು ಹಿಂದೆ ಮುಂದೆ ನೋಡುವುದಿಲ್ಲ. ಹೀಗೆ ಜೀವನದ ಪ್ರತಿ ಹಂತದಲ್ಲೂ ಮಕ್ಕಳ ಬಗ್ಗೆ ಯೋಚಿಸುತ್ತಾ ಅವರ ಏಳಿಗೆಗಾಗಿ ಅವರ ಒಳಿತಿಗಾಗಿ ಶ್ರಮಿಸುತ್ತಾ ಬರುತ್ತಾರೆ. ಕಷ್ಟದಲ್ಲೇ ನಲಿವು ಕಾಣುತ್ತಾರೆ. ಮಕ್ಕಳ ಸಂತೋಷದಲ್ಲೇ ತೃಪ್ತಿ ಪಡುತ್ತಾರೆ.

ಕಷ್ಟಪಟ್ಟು ಹೊಟ್ಟೆಕಟ್ಟಿ ಓದಿಸಿ ದೊಡ್ಡವರನ್ನಾಗಿ ಮಾಡಿ, ನೋವ ಮರೆತು ನಲಿವನು ಅರಸಿ, ಮಾಡಿದ ಶ್ರಮ ಸಾರ್ಥಕವಾಗಿದೆ, ಮಕ್ಕಳಿಗೆ ಕೆಲಸ ಸಿಕ್ಕಿದೆ, ಕಾಲಕ್ಕೆ ಸರಿಯಾಗಿ ಮದುವೆ ಮಾಡಿ ಮೊಮ್ಮಕ್ಕಳ ಆಗಮನದ ಕನಸ ಕಾಣುತ್ತಾ ಮೊಮ್ಮಕ್ಕಳಿಗೆ ತಮ್ಮಿಂದ ಕೊಡಬಹುದಾದ ಖುಷಿ, ಮೊಮ್ಮಕ್ಕಳ್ಳೊ೦ದಿಗಿನ  ಆಟ ಪಾಠಗಳ ಬಗ್ಗೆ ಎಣಿಸುತ್ತಾ, ಗುಣಿಸುತ್ತಾ ಕಾಲ ಕಳೆಯಬೇಕಾದರೆ ತಮ್ಮ ಮುದ್ದಿನ ಮಕ್ಕಳಿಂದ ಸೊಸೆಯರಿಂದ ಸಿಡಿಲಿನಂತ ಸುದ್ದಿಯನ್ನು ಕೇಳುತ್ತಾರೆ. ಅದು ಅವರನ್ನು ವೃದ್ದಾಶ್ರಮಕ್ಕೆ ಕಳುಹಿಸುವ ವಿಚಾರ. ಅಪ್ಪ ಅಮ್ಮಂದಿರನ್ನು ಮಕ್ಕಳಿಂದ ದೂರವಿರಿಸುವ ವಿಚಾರ.ಇಷ್ಟು ದಿನ ಕಣ್ಣ ಮುಂದೆ ಮಕ್ಕಳ ಸುಖ ಸಂತೋಷ, ದುಃಖ ದುಮ್ಮಾನಗಳನ್ನು ಕಣ್ಣಲ್ಲಿ ಕಣ್ಣಿಟ್ಟು, ಮಕ್ಕಳ ಪ್ರತಿ ಹೆಜ್ಜೆಯಲ್ಲಿಯೂ ನಿಲುವಾಗಿ ನಿಂತ ಪೋಷಕರಿಗೆ ಇದು ನುಂಗಲಾರದ ತುತ್ತೇ ಸರಿ. ಆದರೂ ಎಷ್ಟೇ ಕಷ್ಟವೆನಿಸಿದರೂ, ಎಷ್ಟೇ ನೋವೆನಿಸಿದರೂ ಮರು ಮಾತಾಡದೆ ಮರು ಪ್ರಶ್ನಿಸದೆ ಮಕ್ಕಳ ಸಂತೋಷಕ್ಕಾಗಿ ಇಳಿವಯಸ್ಸಿನಲ್ಲಿ ಅಪ್ಪ ಅಮ್ಮ ವೃದ್ದಾಶ್ರಮ ಸೇರುತ್ತಾರೆ.

ಮೊದಮೊದಲು ವಾರಕ್ಕೊಮ್ಮೆ ಭೇಟಿ ಮಾಡುವ ಮಕ್ಕಳು, ಆಮೇಲೆ ತಿಂಗಳಿಗೊಮ್ಮೆ ಭೇಟಿ ಮಾಡುತ್ತಾರೆ. ಕಾಲ ಕಳೆದಂತೆ ತಮಗೆ ಅಪ್ಪ ಅಮ್ಮ ಎಂಬ ಎರಡು ಜೀವಗಳಿವೆ ಎಂಬುದನ್ನು ಎಷ್ಟೋ ಜನ ಮರೆತೇ ಬಿಡುತ್ತಾರೆ. ಕಣ್ಣ ಮುಂದಿದ್ದರೂ, ಕಣ್ಣ ಮರೆಯಲ್ಲಿದ್ದರೂ ಸದಾ ಮಕ್ಕಳು ಮೊಮ್ಮಕ್ಕಳ ಬಗ್ಗೆ ಯೋಚಿಸುತ್ತಾ, ಮಕ್ಕಳ ಬರುವಿಕೆಗಾಗಿ ಕಾಯುತ್ತಾ, ಕೊರಗುತ್ತಾ ಇಳಿಜೀವಗಳು ಜೀವನ ದೂಡುತ್ತಾರೆ.

ಇಷ್ಟೆಲ್ಲಾ ಆಗುತ್ತಿರುವುದು ಪಾಶ್ಚ್ಯಾತ್ಯ ಸಂಸ್ಕೃತಿಯ ಕರಿ ನೆರಳಿನಿಂದಾಗಿ. ಪಕ್ಕಕ್ಕೆ ಹೆಂಡತಿ ಬಂದೊಡನೆ ಅಪ್ಪ ಅಮ್ಮಂದಿರ ನೆರಳು ಬೇಡವೆನಿಸಿ, ಅವರು ಮಾಡಿದ ತ್ಯಾಗ ಶ್ರಮಗಳ ಗಾಳಿಗೆ ತೂರಿ, ಹೆಂಡತಿಯ ಕೈಗೆ ಬುದ್ದಿ ಕೊಟ್ಟು ಹೆಂಡತಿ ಹಾಕಿದ ತಾಳಕ್ಕೆ ಕುಣಿಯುತ್ತಾ, ತಾನು , ತನ್ನ ಹೆಂಡತಿ, ತನ್ನ ಮಕ್ಕಳ ಬಗ್ಗೆ ಮಾತ್ರ ಯೋಚಿಸುವ ಕೆಟ್ಟ ಗುಣದಿಂದಾಗಿ.

ಇಂದು ಪಾಶ್ಚ್ಯಾತ್ಯ ಸಂಸ್ಕೃತಿಯ ಹಾವಳಿಯಿಂದಾಗಿ ಜನರು ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಲೆಕ್ಕಿಸದೆ ಸಂಬಂದಗಳ ಬೆಲೆ ಮತ್ತು ಸಂಸ್ಕಾರಗಳನ್ನು ಮರೆಯುತ್ತಿದ್ದಾರೆ. ಎಲ್ಲಾ ಬೆಳವಣಿಗೆಗಳಿಂದ ನಾವು ನಮ್ಮವರು ಎಂಬ ಭಾವನೆಯನ್ನು ಮರೆಯುತ್ತಿದ್ದಾರೆ. ಎಲ್ಲವುದಕ್ಕಿಂತ ಹೆಚ್ಚಾಗಿ ಹಿರಿ ಜೀವಗಳ ಮೇಲಿನ ಪ್ರೀತಿ ಗೌರವ ಹೊರಟು ಹೋಗಿ ಅವರ ಸೇವೆ ನಾವೇಕೆ ಮಾಡಬೇಕು ಎಂದೆಣಿಸಿ ವೃದ್ದಾಶ್ರಮಗಳತ್ತ ಕಣ್ಣು ಹಾಯಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ  ವೃದ್ದಾಶ್ರಮಗಳು  ಬೀದಿಗೊಂದು ತಲೆ ಎತ್ತುತ್ತಿವೆ.

ವೃದ್ದಾಶ್ರಮಕ್ಕೆ ಬಿಟ್ಟರೂ ವಾಸಿ ಕೆಲವು ಪುಣ್ಯಾತ್ಮರು ಜನ್ಮ ಕೊಟ್ಟ ಜೀವಗಳನ್ನು ನಿನ್ನೆ ಮೊನ್ನೆ ಬಂದ ಹೆಂಡತಿಯ ಮಾತು ಕೇಳಿ ಇತ್ತ ಮನೆಯಲ್ಲಿಯೂ ಇರಿಸಿಕೊಳ್ಳದೆ ಅತ್ತ ಆಶ್ರಮಕ್ಕೂ ಬಿಡದೆ ಮನೆಯಿಂದ ಹೊರದೂಡುತ್ತಾರೆ. ಕೈಯಲ್ಲಿ  ಶಕ್ತಿ ಇರುವಾಗ ಮಕ್ಕಳಿಗಾಗಿ ದುಡಿದ ಜೀವಗಳು ತಮಗಾಗಿ ಏನೂ ಮಾಡಿಕೊಳ್ಳದ ಪರಿಣಾಮ ಅಕ್ಷರಸಹ  ಬೀದಿಗೆ ಬೀಳುತ್ತಾರೆ. ಹೊಟ್ಟೆ ಪಾಡಿಗಾಗಿ ಭಿಕ್ಷೆ ಬೇಡುತ್ತಾರೆ
ಹೀಗೆ ಭಿಕ್ಷೆ ಬೇಡುವ ಸ್ಥಿತಿಗೆ ತಳ್ಳಿದ ಮಕ್ಕಳಿಗೆ ಹಿಡಿ ಶಾಪ ಕೂಡ ಹಾಕದೆ ದೇವರು ಕೊಟ್ಟ  ಜೀವವನ್ನು ಅವನೇ ತೆಗೆದುಕೊಂಡು ಹೋಗಲೆಂದು ಜೀವನ ಸಾಗಿಸುತ್ತಾರೆ.

ಮುದ್ದು ಮಾಡಿ, ನೆಲಕ್ಕೆ ಬಿಟ್ಟರೆ ಮಾಸಿಹೋಗುತ್ತಾರೆ  ಎಂದು ಅಂಗೈಯಲ್ಲಿಟ್ಟು  ಲಾಲಿಸಿ ಪಾಲಿಸಿದ ಪೋಷಕರು ಮುಪ್ಪಾದ ಮೇಲೇಕೆ ಬೇಡವೆನಿಸುತ್ತಾರೆ...? ಪ್ರತಿ ಹೆಜ್ಜೆಯಲ್ಲೂ ಊರುಗೋಲಂತಿದ್ದವರನ್ನು ನಡೆಯಲು ಬಂದಾಕ್ಷಣ ಊರುಗೋಲನ್ನು ಬಿಸಾಡುವಂತೆ ಬೀದಿಗೆ ತಳ್ಳುವರೇಕೆ ...? ಎಷ್ಟಿದ್ದರೇನು  ಏನಿದ್ದರೇನು  ತಂದೆ ತಾಯಿಯ ಋಣವ ತೀರಿಸಲಾಗುವುದೇ...? ಅವರು ಮಾಡಿದ ತ್ಯಾಗಕ್ಕೆ ತೋರಿದ ಪ್ರೀತಿಗೆ ಬೆಲೆ ಕಟ್ಟಲಾಗುವುದೇ....?

ಕಾಲ ಚಕ್ರ ಎಂದೂ ನಿಲ್ಲುವುದಿಲ್ಲ ಸದಾ ಸುತ್ತುತ್ತಲೇ ಇರುತ್ತದೆ. "ಮಾಡಿದ್ದುಣ್ಣೋ  ಮಹರಾಯ" ಎಂಬ ಗಾದೆ ಮಾತಿನಂತೆ ನಾವುಗಳು ನಮ್ಮ ಅಪ್ಪ ಅಮ್ಮಂದಿರಿಗೆ ಮಾಡಿದ ರೀತಿಯನ್ನು ನೋಡಿ ಬೆಳೆದ ನಮ್ಮ ಮಕ್ಕಳು ನಮಗೂ ಅದೇ ರೀತಿ ಮಾಡುತ್ತಾರೆ ನಾವು ನಮ್ಮ ಅಪ್ಪ ಅಮ್ಮಂದಿರನ್ನು ಸೇರಿಸಿದ ವೃದ್ದಾಶ್ರಮದಲ್ಲೇ ನಮಗೂ ಒಂದು ಸೀಟನ್ನು ಕಾದಿರಿಸುತ್ತಾರೆ. ನಾವು ತಳ್ಳಿದ ಬೀದಿಯಲ್ಲಿ ನಮಗೂ ಒಂದು ಪುಟ್ ಪಾತಿನ ಮೂಲೆಯನ್ನು ಕಾದಿರಿಸುತ್ತಾರೆ.

ಇಷ್ಟೆಲ್ಲಾ ಅನಾಹುತಗಳಿಗೆ ಎಡೆ ಮಾಡಿಕೊಡದೆ ಎಷ್ಟೇ ತಿಳಿದಿದ್ದರೂ, ಏನೆಲ್ಲಾ ಸಾಧಿಸಿದ್ದರೂ, ಜಗತ್ತನ್ನೆಲ್ಲಾ ಸುತ್ತಿದ್ದರೂ  ಪಾಶ್ಚ್ಯಾತ್ಯ ಸಂಸ್ಕೃತಿಗೆ ಮಾರು ಹೋಗದೆ, ಕಲ್ಲು ದೇವರ ಪೂಜಿಸದೆ, ನಮ್ಮ ತಂದೆ ತಾಯಿಯರ ಪೂಜಿಸಿ, ನಮ್ಮ ಸಂಸ್ಕೃತಿ ಸಂಪ್ರದಾಯಗಳ ಪಾಲಿಸಿ, ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ಸಂಸ್ಕಾರ ಕೊಟ್ಟು ಜೀವನದ ಮೌಲ್ಯಗಳನ್ನು ಕಟ್ಟಿ ಕೊಟ್ಟು ಸ್ವಾಸ್ಥ್ಯ ಸಮಾಜವ ನಿರ್ಮಿಸಲು ಮುಂದಾಗೋಣ.

                                         ಇಂತಿ,
                                                 ಕವಿತಾಗೌಡ


Monday 11 March 2013

ರಾಮನಂತ ಗಂಡ ಬೇಕು... ಆದ್ರೆ ಕೃಷ್ಣನಂತ ಮಗ ಬೇಕು...


ನನಗೆ ಮಾತು ಅಂದ್ರೆ ಬಹಳ ಇಷ್ಟ... ಎಷ್ಟು ಇಷ್ಟ ಅಂದ್ರೆ ಅದುನ್ನ ಹೇಳೋಕೆ ಆಗಲ್ಲ...!

"ಸತ್ತಮೇಲೆ ಮಲಗೋದು ಇದ್ದಿದ್ದೆ ಇವಾಗ ಎದ್ದು ಕೆಲಸ ನೋಡಿ ಅಂತ ಯಾರೋ ಮಹಾನುಭಾವರು ಹೇಳಿದ ಮಾತುಗಳನ್ನ ಎಲ್ಲೋ ಓದಿದ ನೆನಪು. ಅದೇ ಮಾತನ್ನ "ಸತ್ತ ಮೇಲೆ ಬಾಯಿ  ಮುಚ್ಚೋದು ಇದ್ದಿದ್ದೆ ಇವಾಗ ಎಷ್ಟು ಬೇಕೋ   ಅಷ್ಟು ಮಾತಾಡಿ" ಅಂತ  change ಮಾಡಣ ಅಂತ ಯೋಚನೆ ಮಾಡುತ್ತಾ ಇದೀನಿ.

ನನ್ನ ಎಲ್ಲ ಸ್ನೇಹಿತರು ನನಗಿಂತ ದೊಡ್ಡವರು. ಸ್ಕೂಲ್ ಇಂದ ಕಾಲೇಜ್ ವರೆಗೂ ನಾ ಜಾಸ್ತಿ ಜೊತೆ ಇರುತ್ತಾ ಇದ್ದಿದ್ದು  ಬರೀ ಸೀನಿಯರ್ ಅಕ್ಕಂದಿರ ಜೊತೆನೆ.ಈಗ ಕೂಡ ಆಫೀಸ್ ಅಲ್ಲಿ ಗಂಟೆ ಗಟ್ಟಲೆ ಮಾತಾಡೋದು ನನಗಿಂತ ದೊಡ್ಡ ಅಕ್ಕಂದಿರ ಜೊತೆ

ನಾವು ಮಾತಾಡುವಾಗೆಲ್ಲ ಮಾತಿನ ಮೊದ ಮೊದಲು ನಮ್ಮ ನಮ್ಮ ಕಷ್ಟ ಸುಖಗಳ ಬಗ್ಗೆ ಮಾತನಾಡುತ್ತೇವೆ. ಆಮೇಲೆ ಇದ್ದಿದ್ದೆ ಎಲ್ಲ ಹುಡುಗಿಯರ ತರ Dress, Make up items  ಹಾಗೆ ಹೀಗಿನ ಟ್ರೆಂಡ್ ಬಗ್ಗೆ ಸ್ವಲ್ಪ ಚರ್ಚೆ, ಆಮೇಲೆ ಅವರ ಸಂಸಾರದ ಸುಖ ದುಃಖ ಇಷ್ಟ ಕಷ್ಟಗಳನ್ನ ಎಳೆಎಳೆಯಾಗಿ ಬಿಚ್ಚಿಇಡುತ್ತಾರೆ. ಅದರಲ್ಲಿ ಕೆಲವೊಂದು ತುಂಬಾ ದುಃಖ ತರಿಸುತ್ತವೆ, ಥೂ... ಇಷ್ಟೇನಾ ಹುಡುಗಿಯರ ಜೀವನ, ಇಷ್ಟೇನಾ ಹುಡುಗಿಯರ ಭಾವನೆಗಳಿಗೆ ಸಮಾಜ ಕೊಡೊ ಬೆಲೆ ಅನಿಸಿದರೆ ಮತ್ತೆ ಕೆಲವೊಂದು ನನಗೆ ಗೊತ್ತಿಲ್ಲದೇ ನನ್ನನ್ನ ಎಲ್ಲಿಗೋ ಕದ್ದು ಹೋಗುತ್ತವೆ.

ಪ್ರತಿ ಸಾರಿ  ನಾವು ಮಾತನಾಡುವಾಗ ನನ್ನನ್ನ ಯೋಚನಾ ಲೋಕಕ್ಕೆ ಕದ್ದು ಹೋಗೋ ವಿಷಯದ ಬಗ್ಗೆ ಬರಿತಾ ಹೋಗುತ್ತೇನೆ ನೀವು ಓದುತ್ತ ಬನ್ನಿ ನೋಡೋಣ ನನ್ನ ನಿಮ್ಮ ದೋಣಿ ಎಲ್ಲಿಗೆ ಹೋಗಿ ಸೇರುತ್ತವೆ ಅಂತ...

ನಾ ಕೇಳಿರೋ ಹಾಗೆ ನೋಡಿರೋ ಹಾಗೆ ಪ್ರತಿಯೊಬ್ಬ ಹೆಣ್ಣು ನನಗೆ ಶ್ರೀಕೃಷ್ಣ ನಂತ ಮಗ ಬೇಕು, ಶ್ರೀರಾಮ ನಂತ ಗಂಡ ಬೇಕು ಅಂತ ತನ್ನ ಮನದಾಳದಲ್ಲಿ ಆಸೆಯನ್ನ ಇಟ್ಟುಕೊಂಡಿರುತ್ತಾಳೆ.

ಶ್ರೀಕೃಷ್ಣ ಕೂಡ ಪರಮಾತ್ಮ, ಶ್ರೀ ರಾಮ ಕೂಡ ಪರಮಾತ್ಮ ಆದ್ರೆ ಇಲ್ಲಿ ಎಲ್ಲರು ತನ್ನ ಗಂಡ ಶ್ರೀರಾಮಚಂದ್ರನ ತರ ಏಕ ಪತ್ನಿ ವ್ರತಸ್ತನಾಗಿ ಇರಬೇಕು ಅಂತ ಬಯಸುತ್ತಾರೆ  ಆದ್ರೆ ಮಗನ ವಿಷಯಕ್ಕೆ ಬಂದಾಗ ಶ್ರೀಕೃಷ್ಣ ನಂತ ಮಗ ಇರಬೇಕು ಅಂತ ಬಯಸುತ್ತಾರೆ ಯಾಕೆ...?

ಪ್ರತಿಯೊಬ್ಬ ಹೆಣ್ಣು ನಡೆದಾಡುವ ದೇವರು ಅಂತ ಅಂದುಕೊಂಡಿರುವ ತನ್ನ ಗಂಡನಿಗಿಂತ ಮಗನನ್ನ ಜಾಸ್ತಿ ಪ್ರೀತಿಸುತ್ತಾಳೆ. ಗಂಡನ ಬಗ್ಗೆ ಕಾಣದಂತ ಕನಸುಗಳನ್ನ ಮಗನ ಮೇಲೆ ಕಟ್ಟಿರುತ್ತಾಳೆ. ನನ್ನ ಮಗ ಸಾವಿರ ಜನರ ಮದ್ಯೆದಲ್ಲಿ ಇದ್ದರು, ಎಲ್ಲರ ಮದ್ಯೆ ಎದ್ದು ಕಾಣಬೇಕು, ಎಲ್ಲರ ದೃಷ್ಟಿ ಅವನಲ್ಲೇ ಇರಬೇಕು, ಅವನು ಹರಳು ಉರಿದಂತೆ ಮಾತಾಡಬೇಕು, ಅವನ ತುಂಟಾಟದಿಂದ ನನ್ನನ್ನ ಕಾಡಿಸಬೇಕು, ನನ್ನನ್ನ ಗೋಳಾಡಿಸಬೇಕು ಹೀಗೆ ನೂರಾರು ಕನಸು ಕಟ್ಟಿರುತ್ತಾಳೆ.

ಒಂದು ಹಂತದಲ್ಲಿ ಗಂಡನ ಮೇಲೆ ಇರುವ possessiveness ಗಿಂತ ಮಗನ ಮೇಲೆ ಒಂದು ಪಾಲು ಜಾಸ್ತಿನೆ ಇರುತ್ತೆ. ಮಗನ ಮೇಲಿನ ಅತಿಯಾದ ಪ್ರೀತಿಯಿಂದ ಬಂದಿರೋ ಸೊಸೆ ಎಲ್ಲಿ ನನ್ನ ಮಗನನ್ನ ನನ್ನಿಂದ ದೂರ ಮಾಡಿ ಬಿಡುತ್ತಾಳೋ ಅನ್ನೋ ಭಯದಿಂದ, ತಾನೇ ಪ್ರೀತಿಯಿಂದ ಆರಿಸಿ ತಂದ ಸೊಸೆಯನ್ನ ಶತ್ರು ತರ ನೋಡೋದಿಕ್ಕೆ ಶುರು ಮಾಡುತ್ತಾಳೆ.ಹೀಗಿರುವಾಗ  ಗಂಡ ಮಾತ್ರ ಶ್ರೀರಾಮ ಆಗಿರಬೇಕು ಮಗ ಮಾತ್ರ ಶ್ರೀಕೃಷ್ಣ ಆಗಿರಬೇಕು ಅಂತ ಬಯಸುತ್ತಾಳಲ್ಲ ಯಾಕೆ ....?

ಗಂಡನ ತಪ್ಪನ್ನ ಕ್ಷಮಿಸದ ಹೆಣ್ಣು ಮಗನ ತಪ್ಪನ್ನ ಸಲಿಸಾಗಿ ಕ್ಷಮಿಸಿ ಮಗನ ಪರ ವಹಿಸುತ್ತಳಲ್ಲ ಯಾಕೆ..?

ಯಾವುದೇ ಹೆಣ್ಣು ನನ್ನ ಗಂಡ ಶ್ರೀಕೃಷ್ಣ ನಂತೆ ಇರಲಿ ಅಂತ ಬಯಸಿದ್ದನ್ನ ನಾ ನೋಡೇ ಇಲ್ಲ.ಪುರಾಣದಲ್ಲಿ ಶ್ರೀಕೃಷ್ಣ ನೆ ನನ್ನ ಗಂಡ ಅಂತ ಅವನಿಗಾಗಿ ಕಾದಿದ್ದ ಮೀರಾ, ವಯಸ್ಸಿನ ಅಂತರವಿದ್ದರೂ ಪ್ರಾಣನಾಥ ಎಂದು ಪ್ರೀತಿಸಿದ ರಾಧೇ, ಕೃಷ್ಣ ನನ್ನು ವರಿಸಿದ ರುಕ್ಮಿಣಿ, ಸತ್ಯ ಭಾಮೆ ಮನಸ್ಸು ಎಂತಹದ್ದು ಅಂತ ಯೋಚಿಸಿದರೆ ಅವರೆಲ್ಲರ ಮನಸ್ಸು ನಿಗೂಡ ಅನಿಸುತ್ತದೆ ಅಲ್ಲವೇ..?

ಕೆಲವು ಪುರುಷ ಮಹಾಶಯರು ಹೀಗಿನ ಕಾಲದಲ್ಲೂ ಎರಡು ಮೂರು ಮದುವೆ ಆದವರು ಇದ್ದಾರೆ. ಆದರೆ ತನ್ನ ಗಂಡನೇ ಚಾರಿತ್ರ ಗೊತ್ತಾದಾಗ ಎಲ್ಲಾ ಹೆಂಡತಿಯರು ಸೇರಿಕೊಂಡು ಗಂಡನ ಮರ್ಯಾದೆ ಹರಾಜು ಹಾಕೊದಂತು guarantee ...ಆದ್ರೆ ರುಕ್ಮಿಣಿ ಸತ್ಯಭಾಮೆಯರು ಕೃಷ್ಣ  ಎಲ್ಲಾ ಚಾರಿತ್ರ ಗೊತ್ತಿದ್ದರೂ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಅವರು ನಿಜವಾಗಿಯೂ ಅಸ್ಟೊಂದು ಸಹನೆ ಉಳ್ಳವರಾಗಿದ್ದರೋ  ಅಥವಾ ಎಲ್ಲಾ ಕಂಡು ಗಂಡನ ಮರ್ಯಾದೆ ತೆಗೆಯುವುದು ಬೇಡ ಎಂದು ಸುಮ್ಮನಿದ್ದರೋ ಗೊತ್ತಿಲ್ಲ

ಆದರು ಹೆಣ್ಣು ಉಟ್ಟ ಸೀರೆ ಬೇಕಾದರು ಹಂಚಿಕೊಂಡಾಳು ಕಟ್ಟಿಕೊಂಡ ಗಂಡನನ್ನ ಹಂಚಿಕೊಳ್ಳಲಾರಳು  ಎಂಬ ಗಾದೆ ಇದೆ ಅದರಂತೆ ನೋಡಿದರೆ ರುಕ್ಮಿಣಿ ಭಾಮೆಯರ ಮನಸ್ಸು ಮಾತ್ರ ತರ್ಕಕ್ಕೆ ನಿಲುಕದಂತಿದೆ ಅಲ್ಲವೇ...?


ಇದೆಲ್ಲ ನೋಡಿದರೆ  "ಮೀನಿನ ಹೆಜ್ಜೆ ಬೇಕಾದರೂ ಕಂಡು ಹಿಡಿಬಹುದು ಹೆಣ್ಣಿನ ಮನಸು ಅರಿಯೋದು ಕಷ್ಟ" ಅನ್ನೋ ಮಾತು ಅಕ್ಷರ ಸಹ ನಿಜ ಅನಿಸುತ್ತೆ ಅಲ್ವಾ...?

ಪ್ರತಿಯೊಬ್ಬ ಹೆಣ್ಣು ಗಂಡನಾಗುವವನ ಬಗ್ಗೆ ಏನೆಲ್ಲಾ ಕನಸುಗಳನ್ನು ಕಟ್ಟಿಕೊಂಡಿರುತ್ತಾಳೆ ಅನ್ನೋ ಸತ್ಯ ಗಂಡೆಂಬ ಪ್ರಾಣಿಗೆ ತಿಳಿದಿದ್ದರೂ ಎನೂ ಅರಿಯದವನಂತೆ ಹೊರಗೆ ಮಾತ್ರ ಗೌತಮ ಬುದ್ದನ ತರಹದ ಪೋಸ್ ಕೊಡುತ್ತಾ, ಒಳಗೆ ಮಾತ್ರ ತೋರಿಸುವ ಹುಚ್ಚಾಟ, ಐಲುತನ, ತುಂಟಾಟ, ಮುಂಗೋಪ ಇಷ್ಟೇ ಅಲ್ಲದೆ ತನ್ನ ದುಡಿಮೆಯಿಂದಲೇ ಬದುಕಬೇಕಾದ ಜೀವ (ಹೆಂಡತಿ) ಎಂದೇ ಭಾವಿಸುವ ಗಂಡನ ದರ್ಬಾರಿನಿಂದಾಗಿ ಪ್ರತಿ ದಿನ ತನ್ನ ಸ್ವಾಭಿಮಾನದ ಮೇಲೆ ಬೀಳುವ ಏಟನ್ನು ಸಹಿಸಲಾಗದೆ ದಿನಕಳೆದಂತೆ ಎದುರು ಮಾತನಾಡುವುದಕ್ಕೆ ಆರಂಭಿಸಿದಾಗ ಮನೆಯಲ್ಲಿ ಉಂಟಾಗಬಹುದಾದ ಮಾರಾಮಾರಿಗೆ ಹೆದರಿ, ಕೆಣಕಿದಾಗ ಬಡಬಡಿಸುವುದು, ಹೆದರಿಸಿದಾಗ ಕೆಕ್ಕರಿಸುವುದು ಆತನ ಮೇಲಿನ ಸಿಟ್ಟನ್ನು ಪಾತ್ರೆ ಪಗಡೆಗಳ ಮೇಲೆ ತೋರಿಸುವ ಹೆಣ್ಣು ಜಾತಿಗೆ ಗಂಡೆಂಬ ಪ್ರಾಣಿಯ ಮೇಲೆ ನಿರಂತರ ಪ್ರೀತಿ ಒಂದೇ ತೆರನಾಗಿರಲು ತಾನೇ ಹೇಗೆ ಸಾಧ್ಯ ..?

ನನ್ನ ಕುಟುಂಬಕ್ಕೆ ಮೊದಲ ಆದ್ಯತೆ ... ನನಗೆ ನನ್ನ ಪ್ರೀತಿ.. ನನ್ನ ಹೆಂಡತಿ.. ಮಕ್ಕಳು ..ನನ್ನ ಸಂಸಾರ ಮೊದಲು ಎನ್ನುವಂತಿರುವ ಗಂಡ ಬೇಕೆಂಬ ಹೆಣ್ಣಿನ ಆಶಾಗೋಪುರದ ಕಳಶವನ್ನೇ ಕೆಲವೊಮ್ಮೆ ಅಲ್ಲಾಡಿಸಿ ಬಿಡುವ ಪತಿರಾಯನ ಮೇಲೆ ನಾ ತಿಳಿದಂತೆ  ಸಮಾಜದ ಬಹುಪಾಲು ಹೆಂಡತಿಯರಿಗೆ ತನ್ನ ಒಡಲ ಕುಡಿ ಮಗನ ಮೇಲಿನ ಮಮತೆಗಿಂತ ಗಂಡನ ಮೇಲಿನ ಪ್ರೀತಿ ಹೆಚ್ಚಾಗಿಲ್ಲವೆಂದೇ ಭಾವಿಸಿದ್ದೇನೆ.

 ನನ್ನ ಭಾವನೆ ಸುಳ್ಳಾದಲ್ಲಿ ಜೀ..ವನ ದಲ್ಲಿ ಸವಿಯುವ ಸಂ ..ಸಾರ ಎಷ್ಟೊಂದು ಸಿಹಿ.. ಸಿಹಿ...

ಇದೆಲ್ಲಾ ಯಾಕೆ ಅಂದ್ರೆ......

ಒಂದ್ ಕಥೆ ಇದ್ಯಲ್ಲಾ ಒಬ್ಬ ಮಗ ತನ್ನ ತಾಯಿನ ಅರ್ಥ ಮಾಡ್ಕೊಳ್ದೆ ಆಕೆನ ಕೊಂದು ಆಕೆ ಹೃದಯಾನ ಕತ್ತರಿಸಿ ಕೈನಲ್ಲಿಡಿದು ಓಡೋವಾಗ ಆತುರದಲ್ಲಿ ಎಡವಿ ಬಿದ್ದಾಗ ಆತನ ಕೈನಲ್ಲಿದ್ದ ಆತನ ತಾಯಿಯ ಹೃದಯ ಅಯ್ಯೋ ಕಂದ ಏಟಾಯ್ತು ನಿನಗೆ. ನೋಡ್ಕೊಂಡು ನಡೀ ಕಂದಾ ನೋವಾಯ್ತಾ ಮಗು..?ಮೊದಲು ಸುಧಾರಿಸ್ಕೋ ಮಗನೆ.

ಮಗನಿಗೆ ಸ್ವಲ್ಪ ನೋವು ಆದ್ರು ಆತನ ತಾಯಿ ಹೃದಯ ದುಃಖ ಪಡುತ್ತೆ ಸಂಕಟ ಅನುಭವಿಸುತ್ತೆ ಅನ್ನೋದು \ಜಗತ್ತಿನಲ್ಲಿ ಕಾಣಬಹುದಾದ ಪರಮ ಸತ್ಯ. ಯಾಕೆಂದ್ರೆ..? ತಾಯಿ ಮನಸು ಆಕೆಯ ಬೇರ್ಯಾವುದೇ ಬೇಕು ಬೇಡಗಳಿಗೆ ಸ್ಪಂದಿಸದೇ ಇದ್ರು ಮಗನ ಚಿಕ್ಕ ಚಿಕ್ಕ ನೋವು ನಲಿವುಗಳಿಗು ಬೇರೆಲ್ಲರಿಗಿಂತ ಮುಂಚೆ ಅಂದರೆ ಸ್ವತಃ ಮಗನಿಗೆ ಅನುಭವಕ್ಕೆ ಬರುವ ಮೊದಲೇ ಆತನಿಗೆ ನಲಿದಾಗ ಸಂತೋಷದಲ್ಲಿ ತೇಲಾಡುತ್ತೆ. ಆತನಿಗೆ ನೋವಾದಾಗ ವಿಲಿ ವಿಲಿ ಒದ್ದಾಡುತ್ತೆ ಪರಿತಪಿಸಿ ಚಡಪಡಿಸುತ್ತೆ. ಮಗನ ನೋವು ದೂರ ಮಾಡಲು ಎಂಥಹ ತ್ಯಾಗಕ್ಕೂ ಮುಂದಾಗುತ್ತೆ ಇದು  ಭಗವಂತನ ಸೃಷ್ಟಿಯಲ್ಲಿ ರೂಪುಗೊಂಡಿರುವ ತಾಯಿ ಹೃದಯ ಎಂಬ ಅದ್ಬುತ ಪರಿಕಲ್ಪನೆ.

ದೇವರು ಎಲ್ಲರೊಂದಿಗೆ ಇರಲಾಗುವುದಿಲ್ಲವೆಂದೇ ಎಲ್ಲರಿಗು ತಾಯಿಯನ್ನು ಕರುಣಿಸಿರುತ್ತಾನೆ. ಸಾವಿರಾರು ಕೋಟಿಗಳಿದ್ದರೇನಂತೆ ಅಮ್ಮನ ಮಡಿಲ ಮುದ ಅನುಭವಿಸದ ಆಗರ್ಭ ಶ್ರೀಮಂತ ಕೂಡ ಬಡವನೆ ತಾನೇ ..?

ತಾಯಿ ಒಡಲ ಕುಡಿಯಾಗಿ, ತನ್ನದೇ ದೇಹದ ಭಾಗವೊಂದು ತನ್ನ ಮಡಿಲಲ್ಲಿ ಏನೆಲ್ಲಾ ತುಂಟಾಟವಾಡಿ, ತಾಯ್ತನದ ಭಾಗ್ಯ ಕಲ್ಪಿಸಿ, ಭಾಳ ಮುಸ್ಸಂಜೆಯಲ್ಲಿ ಆಸರೆಯಾಗುವ ಮಗನ ಮೇಲೆ ತಾಯಿ ಹೃದಯ ಸೃಜಿಸುವ ಮಮತೆ ಜಗತ್ತಿನ ಬೇರೆಲ್ಲಾ ಪ್ರೀತಿಗಿಂತ ಉತ್ಕಟವಾದುದೆಂಬುದರಲ್ಲಿ ಎರಡು ಮಾತಿಲ್ಲ ಎಂಬುದೇ ಪರಮಸತ್ಯ.



                                                           ಇಂತಿ
                                                                     ಕವಿತಾ ಗೌಡ